Breaking

Search

Sunday, 14 June 2026

15 June 2026 Current Affairs ಪ್ರಚಲಿತ ವಿದ್ಯಮಾನಗಳು

 


ರಾಜ್ಯ ಸುದ್ದಿಗಳು :


ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯುವ ಪುರಸ್ಕಾರಕ್ಕೆ ಆಯ್ಕೆಯಾದ ಗಾಯಕಿ ರಂಜನಿ ವಾಸುಕಿ

ಕೇಂದ್ರ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಅಡಿಯಲ್ಲಿ ಬರುವ 'ಸಂಗೀತ ನಾಟಕ ಅಕಾಡೆಮಿ'ಯು ಘೋಷಿಸಿರುವ 2025ನೇ ಸಾಲಿನ ಪ್ರತಿಷ್ಠಿತ 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ'ಕ್ಕೆ ಬೆಂಗಳೂರು ಮೂಲದ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಡಾ. ರಂಜನಿ ವಾಸುಕಿ ಅವರು ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲಿಯೇ ಸಂಗೀತದ ಪ್ರಾಥಮಿಕ ಪಾಠಗಳನ್ನು ಕಲಿತು, ಎಂ.ಎ. ಸಂಗೀತದಲ್ಲಿ ಚಿನ್ನದ ಪದಕ ಹಾಗೂ ಪಿಎಚ್.ಡಿ ಪದವಿ ಪಡೆದಿರುವ ರಂಜನಿ ಅವರು, ತಮ್ಮ ವಿಶಿಷ್ಟ ಗಾಯನ ಶೈಲಿಯ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಈ ರಾಷ್ಟ್ರ ಮಟ್ಟದ ಗೌರವಕ್ಕೆ ಭಾಜನರಾಗಿದ್ದಾರೆ. ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ನೀಡಲಾಗುವ ಈ ಪುರಸ್ಕಾರಕ್ಕೆ ಕರ್ನಾಟಕದ ಶಿವಶ್ರೀ ಸ್ಕಂದ ಪ್ರಸಾದ್ (ನೃತ್ಯ), ಮಹಾಲಕ್ಷ್ಮಿ ಶೆಣೈ (ಹಿಂದೂಸ್ತಾನಿ ಗಾಯನ), ಬಿ.ಎಸ್. ಪ್ರಶಾಂತ್ (ಮೃದಂಗ) ಮತ್ತು ಮುಕ್ಕಾಟೀರ ಶೀಲಾ ನಂಜಪ್ಪ (ನೃತ್ಯ) ಸೇರಿದಂತೆ ಹಲವು ಯುವ ಪ್ರತಿಭೆಗಳು ಸಹ ಆಯ್ಕೆಯಾಗಿದ್ದಾರೆ.


------------------------------


ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆ


ಈ ಯೋಜನೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಆಗಿದ್ದು, ಕರ್ನಾಟಕದ ಹೊಸಕೋಟೆ (Hoskote) ಯಿಂದ ತಮಿಳುನಾಡಿನ ಶ್ರೀಪೆರಂಬುದೂರು (Sriperumbudur) ವರೆಗೆ ವಿಸ್ತರಿಸಿದೆ. ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೂನ್ 14ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ರಸ್ತೆ ನಿರ್ಮಾಣ, ಸಂಚಾರ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.


------------------------------------------------------------------------------------------------------


ರಾಷ್ಟ್ರೀಯ ಸುದ್ದಿಗಳು :


ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ನೇಮಕ

ಪ್ರಸ್ತುತ ಭೂಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ, ಸುಮಾರು ನಾಲ್ಕು ದಶಕಗಳ ಅಪಾರ ಕಾರ್ಯತಂತ್ರ ಹಾಗೂ ಕಾರ್ಯಾಚರಣೆಯ ಮಿಲಿಟರಿ ಅನುಭವ ಹೊಂದಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಭಾರತ ಸರ್ಕಾರವು ನೂತನ ಭೂಸೇನಾ ಮುಖ್ಯಸ್ಥರನ್ನಾಗಿ  ನೇಮಕ ಮಾಡಿದ್ದು, ಅವರು ಜೂನ್ 30 ರಂದು ನಿವೃತ್ತರಾಗಲಿರುವ ಹಾಲಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಸ್ತುತ ಜನರಲ್ ಉಪೇಂದ್ರ ದ್ವಿವೇದಿ ಅವರ ಸೇವಾವಧಿ ಜೂನ್ 30 ರಂದು ಕೊನೆಗೊಳ್ಳಲಿದ್ದು, ಅದೇ ದಿನದಂದು ಧೀರಜ್ ಸೇಠ್ ಅವರು ಭಾರತದ ಅತ್ಯುನ್ನತ ಸೇನಾ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.


---------------------------------------


ಕರ್ನಾಟಕದ 'ಶಕ್ತಿ' ಯೋಜನೆಯ ಮಾದರಿಯಲ್ಲಿ ಕೇರಳ 'ಪ್ರಿಯದರ್ಶಿನಿ ಯೋಜನೆ'ಗೆ ಚಾಲನೆ :

ಕರ್ನಾಟಕದ 'ಶಕ್ತಿ' ಯೋಜನೆಯ ಮಾದರಿಯಲ್ಲಿ, ಕೇರಳ ಸರ್ಕಾರವು 2026ರ ಜೂನ್ 15ರಿಂದ ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಕೆಎಸ್‌ಆರ್‌ಟಿಸಿ (KSRTC) ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ 'ಪ್ರಿಯದರ್ಶಿನಿ' ಯೋಜನೆಯನ್ನು ಜಾರಿಗೆ ತಂದಿದೆ. 


----------------------------------


ಅಸ್ಸಾಂನಲ್ಲಿ ವಯಸ್ಕರಿಗೆ ಹೊಸ ಆಧಾರ್ ವಿತರಣೆ ಸ್ಥಗಿತಗೊಳಿಸಲಾಗಿದೆ 

ಅಕ್ರಮ ವಲಸೆಗೆ ಬ್ರೇಕ್ ಹಾಕವ ಉದ್ದೇಶ 

ಅಕ್ರಮ ವಲಸಿಗರು ಭಾರತೀಯ ದಾಖಲೆಗಳನ್ನು ಪಡೆಯುವುದನ್ನು ತಡೆಯಲು ಅಸ್ಸಾಂ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಹೊಸ ಆಧಾರ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಿದೆ.

ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಿಂದ ಆಗುವ ಅಕ್ರಮ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಸ್ಸಾಂ ರಾಜ್ಯ ಸರ್ಕಾರವು ಒಂದು ಮಹತ್ವದ ಮತ್ತು ಕಠಿಣ ನಿರ್ಧಾರವನ್ನು ಕೈಗೊಂಡಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಇನ್ನು ಮುಂದೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಹೊಸದಾಗಿ ಆಧಾರ್ ಕಾರ್ಡ್‌ಗಳನ್ನು ವಿತರಿಸಬಾರದು ಎಂದು ತೀರ್ಮಾನಿಸಲಾಗಿದೆ.


----------------------------------


ಭಾರತೀಯ ಸೇನಾ ಅಕಾಡೆಮಿಯ(ಐಎಂಎ) ಯಿಂದ  ಇತಿಹಾಸದಲ್ಲೇ ಪ್ರಥಮ ಬಾರಿಗೆ ಸೇನೆಗೆ ಸೇರಿದ 9 ಮಹಿಳಾ ಅಧಿಕಾರಿಗಳು

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಭಾರತೀಯ ಸೇನಾ ಅಕಾಡೆಮಿ (IMA) 1932ರಲ್ಲಿ ಆರಂಭವಾದಾಗಿನಿಂದ ಕೇವಲ ಪುರುಷ ಅಧಿಕಾರಿಗಳಿಗಷ್ಟೇ ತರಬೇತಿ ನೀಡುತ್ತ ಬಂದಿದ್ದಾರೆ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ನಡೆದ ನಿರ್ಗಮನ ಪಥಸಂಚಲನದಲ್ಲಿ ತರಬೇತಿ ಪೂರೈಸಿದ ಒಂಬತ್ತು ಮಹಿಳಾ ಕೆಡೆಟ್‌ಗಳ ಪ್ರಥಮ ತಂಡವನ್ನು ನೇರ ಕಾಯಂ ಕಮಿಷನ್ (Permanent Commission) ಮೂಲಕ ಭಾರತೀಯ ಸೇನೆಗೆ ಸೇರ್ಪಡೆಗೊಳಿಸುವ ಮೂಲಕ ದೇಶದ ರಕ್ಷಣಾ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆ ಯಾಗಿದೆ.

ಭಾರತೀಯ ರಕ್ಷಣಾ ಪಡೆಗಳ ಇತಿಹಾಸದಲ್ಲಿ ಜೂನ್ 13, 2026ರ ಶನಿವಾರದಂದು ಒಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಪ್ರತಿಷ್ಠಿತ ಭಾರತೀಯ ಸೇನಾ ಅಕಾಡೆಮಿಯ (IMA) 94 ವರ್ಷಗಳ ಇತಿಹಾಸದಲ್ಲೇ ಅತಿ ದೊಡ್ಡ ಮಹತ್ತರ ಬದಲಾವಣೆಯೊಂದು ಸಂಭವಿಸಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಮೂಲಕ ಆಯ್ಕೆಯಾಗಿ ಬಂದು, ಐಎಂಎ ಇತಿಹಾಸದಲ್ಲೇ ಮೊದಲ ಬಾರಿಗೆ ಕಠಿಣ ಮಿಲಿಟರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಒಂಬತ್ತು ಮಹಿಳಾ ಕೆಡೆಟ್‌ಗಳ ಪ್ರಥಮ ತಂಡವು ಭಾರತೀಯ ಭೂಸೇನೆಯ ಅಧಿಕಾರಿಗಳಾಗಿ ಅಧಿಕೃತವಾಗಿ ನಿಯೋಜನೆಗೊಂಡಿದೆ. ಮುಂಚೆ ಮಹಿಳಾ ಅಧಿಕಾರಿಗಳು ಶಾರ್ಟ್ ಸರ್ವೀಸ್ ಕಮಿಷನ್ ಮೂಲಕ ಮಾತ್ರ ಸೇನೆ ಸೇರಲು ಅವಕಾಶವಿತ್ತು, ಆದರೆ ಈ ಒಂಬತ್ತು ಮಹಿಳೆಯರು ಸೇರ್ಪಡೆಯ ದಿನವೇ ನೇರ ಕಾಯಂ ಕಮಿಷನ್ (Direct Permanent Commission) ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.



------------------------------------------------------------------------------------------------------


ಅಂತಾರಾಷ್ಟ್ರೀಯ ಸುದ್ದಿಗಳು :


ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು (World Blood Donor Day) ಪ್ರತಿವರ್ಷ ಜೂನ್ 14 ರಂದು ಆಚರಿಸಲಾಗುತ್ತದೆ

2026ರ  ಥೀಮ್: One Drop of Humanity. Give Blood. Save Lives." (ಒಂದು ಹನಿ ಮಾನವೀಯತೆ. ರಕ್ತದಾನ ಮಾಡಿ. ಜೀವಗಳನ್ನು ಉಳಿಸಿ.)

ರಕ್ತದಾನದ ಮಹತ್ವವನ್ನು ಸಾರಲು ಹಾಗೂ ಸ್ವಯಂಪ್ರೇರಿತ ದಾನಿಗಳನ್ನು ಪ್ರೋತ್ಸಾಹಿಸಲು ಜೂನ್ 14 ರಂದು 'ವಿಶ್ವ ರಕ್ತದಾನಿಗಳ ದಿನ'ವನ್ನು ಆಚರಿಸಲಾಗುತ್ತಿದ್ದು, 2026ರ ವರ್ಷಕ್ಕೆ "ಮಾನವೀಯತೆಯ ಒಂದು ಹನಿ ರಕ್ತ ನೀಡಿ, ಜೀವ ಉಳಿಸಿ!" ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ.

 

------------------------------------


G-7 ಶೃಂಗಸಭೆಯ ವೇದಿಕೆಯಲ್ಲಿ  ಭಾರತ-ಅಮೆರಿಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು ಕುತೂಹಲ ಮೂಡಿಸಿದೆ 


ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ-೭ (G-7) ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೂನ್ 17 ರಂದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಇದು ಕಳೆದ ವರ್ಷದ ಫೆಬ್ರವರಿಯ ನಂತರದ ಅವರ ಮೊದಲ ಮುಖಾಮುಖಿ ಭೇಟಿಯಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.


ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ಭೇಟಿಯು, ಜಾಗತಿಕ ಆರ್ಥಿಕತೆ ಮತ್ತು ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಫ್ರಾನ್ಸ್‌ನ ಇವಿಯಾನ್ (Evian) ನಗರದಲ್ಲಿ ಆಯೋಜಿತವಾಗಿರುವ ಪ್ರತಿಷ್ಠಿತ ಜಿ-೭ ಶೃಂಗಸಭೆಯ ಭಾಗವಾಗಿ ಜೂನ್ 17 ರಂದು ಉಭಯ ನಾಯಕರು ವಿಶೇಷ ಸಭೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ನಡೆಯಲಿರುವ ಈ ಉನ್ನತ ಮಟ್ಟದ ಮಾತುಕತೆಯಲ್ಲಿ ಪ್ರಮುಖವಾಗಿ ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ (Trade Deal), ಇಂಧನ ವಲಯದ ಸಹಕಾರ ಹಾಗೂ ಇತ್ತೀಚಿನ ಜಾಗತಿಕ ವಿದ್ಯಮಾನಗಳ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ.



------------------------------------------------------------------------------------------------------

No comments:

Post a Comment