ರಾಜ್ಯ ಸುದ್ದಿಗಳು :
------------------------------
________________________________________________________________________________
ರಾಷ್ಟ್ರೀಯ ಸುದ್ದಿಗಳು :
ಡಿಜಿಟಲ್ ಸಂಸ್ಥೆಗಳಿಗೆ ಡಿಜಿಟಲ್ ಭದ್ರತೆಯನ್ನು ಪರಿಶೀಲಿಸುವ ಉದ್ದೇಶದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್
ಬಿಜೆಪಿ ಸಂಸದ ಡಾ. ನಿಶಿಕಾಂತ್ ದುಬೆ ನೇತೃತ್ವದ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಯು, ಇತ್ತೀಚಿನ NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಗಳ ವೇಳೆ ಸಾಮಾಜಿಕ ಜಾಲತಾಣಗಳು ಸಾರ್ವಜನಿಕರನ್ನು ಸಂಘಟಿಸಲು ಮತ್ತು ಸುಳ್ಳು ಮಾಹಿತಿ (Fake News) ಪಸರಿಸಲು ಬಳಕೆಯಾದ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಾಂತಿ ಕಾಪಾಡುವುದು, ಬಳಕೆದಾರರ ದತ್ತಾಂಶ ಗೋಪ್ಯತೆ ಹಾಗೂ ಡಿಜಿಟಲ್ ಭದ್ರತೆಯನ್ನು ಪರಿಶೀಲಿಸುವ ಉದ್ದೇಶದಿಂದ ಮೆಟಾ, ಗೂಗಲ್, X ಮತ್ತು ಸ್ನ್ಯಾಪ್‌ಚಾಟ್ ಪ್ರತಿನಿಧಿಗಳಿಗೆ ಆಗಸ್ಟ್ 3, 2026 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
----------------------------------
16ನೇ ಜೂನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್-2026
ತಮಿಳುನಾಡಿನ ಕೊಯಮತ್ತೂರಿನಲ್ಲಿ 2026ರ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ 16ನೇ ಆವೃತ್ತಿಯ ಜೂನಿಯರ್ ಪುರುಷರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ, ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಲು ಹಾಗೂ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳಲ್ಲಿ ಒಟ್ಟು 30 ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಭಾಗವಹಿಸಿ ಕಠಿಣ ಸವಾಲನ್ನು ಎದುರಿಸುತ್ತಿವೆ.
-----------------------------------
ಭಾರತ ನಾವಿಕರ ಪೂರೈಕೆಯಲ್ಲಿ ವಿಶ್ವಕ್ಕೇ 2ನೇ ಸ್ಥಾನ
ಬಿಮೋ-ಐಸಿಎಸ್ (BIMCO-ICS) ಇತ್ತೀಚೆಗೆ ಬಿಡುಗಡೆ ಮಾಡಿರುವ 'ಸೀಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026'ರ ಪ್ರಕಾರ, ಭಾರತವು ಜಾಗತಿಕ ಕಡಲ ರಂಗದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲು ಸಾಧಿಸಿದ್ದು, ಅಂತರರಾಷ್ಟ್ರೀಯ ಹಡಗುಗಳಲ್ಲಿ ಸೇವೆ ಸಲ್ಲಿಸುವ ನಾವಿಕರನ್ನು (Seafarers) ಪೂರೈಸುವ ವಿಶ್ವದ ದೇಶಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 2015 ರಲ್ಲಿ ಶೇ. 5.2 ರಷ್ಟು ಪಾಲುದಾರಿಕೆಯೊಂದಿಗೆ 5ನೇ ಸ್ಥಾನದಲ್ಲಿದ್ದ ಭಾರತ, ಕಳೆದ ಒಂದು ದಶಕದಲ್ಲಿ ಡಿಜಿಟಲೀಕರಣ, ಶಾಸನಬದ್ಧ ಸುಧಾರಣೆಗಳು ಹಾಗೂ ತರಬೇತಿಯ ಪರಿಣಾಮಕಾರಿ ವಿಸ್ತರಣೆಯ ಫಲವಾಗಿ ತನ್ನ ಪಾಲನ್ನು ಶೇ. 12.16 ಕ್ಕೆ (ಒಟ್ಟು 3,11,936 ಸಕ್ರಿಯ ನಾವಿಕರು) ಹೆಚ್ಚಿಸಿಕೊಂಡು ಅಗ್ರಪಂಕ್ತಿಯಲ್ಲಿ ನಿಂತಿದೆ. ಇದಲ್ಲದೆ, ಜಾಗತಿಕವಾಗಿ ಹಡಗು ಆಫೀಸರ್ ಭಾಗದಲ್ಲಿ ಶೇ. 13.41 ಹಾಗೂ ರೇಟಿಂಗ್ಸ್ ನಾವಿಕರ ವಿಭಾಗದಲ್ಲಿ ಶೇ. 11.29 ರಷ್ಟು ಕೊಡುಗೆ ನೀಡುತ್ತಿರುವ ಭಾರತವು, ಕೇಂದ್ರ ಸರ್ಕಾರದ 'ಮಿಷನ್ 20%' ಗುರಿಯೊಂದಿಗೆ ವಿಶ್ವದ ಕಡಲ ಪಡೆಗೆ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ.
ಕೇಂದ್ರ ಸರ್ಕಾರವು ಕಡಲ ವಲಯವನ್ನು ಸುಧಾರಣೆಗಾಗಿ ಜಾರಿಗೆ ತಂದ ಕಾಯ್ದೆಗಳು
ಒಳನಾಡಿನ ನೌಕೆಗಳ ಕಾಯ್ದೆ, 2021 (Inland Vessels Act, 2021)
ಮರ್ಚೆಂಟ್ ಶಿಪಿಂಗ್ ಕಾಯ್ದೆ, 2025 (Merchant Shipping Act, 2025)
ಭಾರತೀಯ ಬಂದರುಗಳ ಕಾಯ್ದೆ, 2025 (Indian Ports Act, 2025)
ಕರಾವಳಿ ಹಡಗು ಕಾಯ್ದೆ, 2025 (Coastal Shipping Act, 2025)
ಜಾಗತಿಕ ನಾವಿಕರ ಪೂರೈಕೆ :
ಬಿಮೋ-ಐಸಿಎಸ್ (BIMCO-ICS) ಅವರ 'ಸೀಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026'ರ ಪ್ರಕಾರ,
ಪ್ರಥಮ ಸ್ಥಾನ : ಫಿಲಿಪ್ಪೀನ್ಸ್ (Philippines)
ದ್ವಿತೀಯ ಸ್ಥಾನ : ಭಾರತ (India) – ಶೇ. 12.16 ರಷ್ಟು ಜಾಗತಿಕ ಪಾಲುದಾರಿಕೆ (ಒಟ್ಟು 3,11,936 ನಾವಿಕರು)
ತದನಂತರದ ಸ್ಥಾನಗಳು ಚೀನಾ, ರಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು.
-------------------------------------
ಆಗಸ್ಟ್ 2026ರ ಆರಂಭದಿಂದ ಜಾರಿಗೆ ಬಂದಿರುವ ಪ್ರಮುಖ ಐದು ಆರ್ಥಿಕ ಮತ್ತು ಆಡಳಿತಾತ್ಮಕ ನಿಯಮಗಳು:
ಪ್ರತಿ ತಿಂಗಳ ಮೊದಲ ದಿನದಿಂದ ಅನ್ವಯವಾಗುವಂತೆ ತೈಲ ಮಾರುಕಟ್ಟೆ ಕಂಪನಿಗಳಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳ ಪರಿಷ್ಕರಣೆ, ಬೋಟ್ಸ್ ಹಾಗೂ ಏಜೆಂಟ್‌ಗಳನ್ನು ನಿಯಂತ್ರಿಸಲು ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಆಧಾರ್ ಮತ್ತು ಒಟಿಪಿ ದೃಢೀಕರಣ ಕಡ್ಡಾಯ, ಜುಲೈ 31ರ ಗಡುವು ಮುಗಿದು ಆಗಸ್ಟ್‌ನಿಂದ ಐಟಿಆರ್ ಸಲ್ಲಿಸುವವರಿಗೆ ರೂ. 5,000 ವರೆಗೆ ತಡವಾದ ಶುಲ್ಕ ವಿಧಿಸುವಿಕೆ, ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಶುಲ್ಕಗಳ ಬದಲಾವಣೆ ಮತ್ತು ಭೌತಿಕ ದಾಖಲೆಗಳ ಅವಶ್ಯಕತೆ ಇಲ್ಲದ 'ಸೆಂಟ್ರಲ್ ಕೆವೈಸಿ 2.0' ವ್ಯವಸ್ಥೆಯು ನಾಗರಿಕರ ದೈನಂದಿನ ಆರ್ಥಿಕ ಹಾಗೂ ಪ್ರಮುಖ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರಲಿದೆ.
-------------------------------------
ಪೇಟಿಎಮ್ ಬ್ಯಾಂಕ್ ವಿಸರ್ಜನೆಗೆ ಅಧಿಕೃತ ಲಿಕ್ವಿಡೇಟರ್ ನೇಮಕ
ನಿಯಂತ್ರಕ ನಿಯಮಗಳು ಹಾಗೂ ಗ್ರಾಹಕ ಪರಿಶೀಲನಾ ವಿಧಾನಗಳ (KYC) ತೀವ್ರ ಲೋಪದೋಷಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೆಹಲಿ ಹೈಕೋರ್ಟ್‌ನ ಅನುಮೋದನೆಯೊಂದಿಗೆ ಪೇಟಿಎಮ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ವಿಸರ್ಜನೆಗೆ ಆದೇಶಿಸಿದ್ದು, ಈ ಕಾನೂನಾತ್ಮಕ ಪ್ರಕ್ರಿಯೆಯನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ಮತ್ತು ಕಂಪನಿಗಳ ಕಾಯ್ದೆ, 2013 ರ ಅಡಿಯಲ್ಲಿ ಪೂರ್ಣಗೊಳಿಸಲು ಮತ್ತು ಬ್ಯಾಂಕಿನ ಆಸ್ತಿ ಹಾಗೂ ಸಾಲ-ಹೊಣೆಗಾರಿಕೆಗಳನ್ನು ನಿರ್ವಹಿಸಿ ಠೇವಣಿದಾರರ ಹಣವನ್ನು ಸುರಕ್ಷಿತವಾಗಿ ಮರುಪಾವತಿಸಲು SBI ಮಾಜಿ ಸಿಜಿಎಮ್(CGM) ಗಿರಿಕುಮಾರ್ ನಾಯರ್ ಅವರನ್ನು ಅಧಿಕೃತ ಲಿಕ್ವಿಡೇಟರ್ ಆಗಿ ನೇಮಿಸಲಾಗಿದೆ.
[ಲಿಕ್ವಿಡೇಟರ್ (Liquidator - ಅಧಿಕೃತ ವಿಸರ್ಜನಾಧಿಕಾರಿ) : ಎಂದರೆ ಒಂದು ಕಂಪನಿ ಅಥವಾ ಬ್ಯಾಂಕ್ ತನ್ನ ವಹಿವಾಟನ್ನು ಮುಚ್ಚುವಾಗ (Winding Up) ಅದರ ಆಸ್ತಿಪಾಸ್ತಿ ಮತ್ತು ಸಾಲ-ಸೋಲಗಳನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡಲು ನೇಮಕಗೊಳ್ಳುವ ಅಧಿಕೃತ ವ್ಯಕ್ತಿ.]
________________________________________________________________________________
ಅಂತಾರಾಷ್ಟ್ರೀಯ ಸುದ್ದಿಗಳು :
ಅಮೆರಿಕದಲ್ಲಿ AI ಮತ್ತು ಇನ್‌ಫ್ಲುಯೆನ್ಸರ್ ರಾಜಕೀಯ ಪ್ರಚಾರ ನಿಯಂತ್ರಣ ಮಸೂದೆ
ಅಮೆರಿಕ ಚುನಾವಣೆಗಳಲ್ಲಿ ಮತದಾರರನ್ನು ತಪ್ಪುದಾರಿಗೆ ಎಳೆಯುವುದನ್ನು ತಡೆಯಲು ಡೆಮಾಕ್ರಟಿಕ್ ನಾಯಕರು ಮಂಡಿಸಿರುವ ಹೊಸ ಮಸೂದೆಯು, ರಾಜಕಾರಣಿಗಳ ಧ್ವನಿ ಅಥವಾ ಚಹರೆಯನ್ನು ಕೃತಕ ಬುದ್ಧಿಮತ್ತೆ (AI Deepfakes) ಮೂಲಕ ದುರ್ಬಳಕೆ ಮಾಡಿಕೊಂಡು ಸೃಷ್ಟಿಸುವ ನಕಲಿ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಲ್ಲದೆ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಣ ಪಡೆದು ಮಾಡುವ ಎಲ್ಲಾ ರೀತಿಯ ರಾಜಕೀಯ ಪ್ರಚಾರದ ಪೋಸ್ಟ್‌ಗಳನ್ನು ‘ಸ್ಪಾನ್ಸರ್ಡ್ ಪ್ರಚಾರ’ ಎಂದು ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಚುನಾವಣಾ ಪಾರದರ್ಶಕತೆಯನ್ನು ಹೆಚ್ಚಿಸುವ ಪ್ರಮುಖ ಗುರಿಯನ್ನು ಹೊಂದಿದೆ.
------------------------------------
ಭಾರತ–ಅಮೆರಿಕ ರಕ್ಷಣೆ, ನಾಗರಿಕ ಪರಮಾಣು ಮತ್ತು ತಂತ್ರಜ್ಞಾನ ಸಹಕಾರ ಬಲವರ್ಧನೆ
ಅಮೆರಿಕದ ಕ್ಯಾಲಿಫೋರ್ನಿಯಾದ Hoover Institution ನಲ್ಲಿ ನಡೆದ ಭಾರತ–ಅಮೆರಿಕ ದುಂಡುಮೇಜಿನ ಚರ್ಚೆಯಲ್ಲಿ ಉಭಯ ದೇಶಗಳು ರಕ್ಷಣೆ, ನಾಗರಿಕ ಪರಮಾಣು ಮತ್ತು ಉನ್ನತ ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಒತ್ತು ನೀಡಿದವು. ಭಾರತದ SHANTI Act ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದ ಹೊಣೆಗಾರಿಕೆ ವ್ಯವಸ್ಥೆಯನ್ನು ಸರಳಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಮೆರಿಕ ಸ್ವಾಗತಿಸಿದೆ. ಜೊತೆಗೆ, ರಕ್ಷಣಾ ಸಹಕಾರವನ್ನು ನೆಲ, ಸಮುದ್ರ, ವಾಯು, ಬಾಹ್ಯಾಕಾಶ ಮತ್ತು ಸೈಬರ್ ಕ್ಷೇತ್ರಗಳಲ್ಲಿ ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಲಾಯಿತು
----------------------------------
'ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನ' ಜುಲೈ 30
ಪ್ರತಿ ವರ್ಷ ಜುಲೈ 30 ರಂದು ಆಚರಿಸಲಾಗುವ 'ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನ'ದ 2026 ರ ಧೈಯವಾಕ್ಯ "Trapped Behind the Scam" ಆಗಿದ್ದು, ಇದು ನಕಲಿ ಉದ್ಯೋಗಾವಕಾಶಗಳ ಮೂಲಕ ಯುವಕರನ್ನು ಆಕರ್ಷಿಸಿ ಸೈಬರ್ ವಂಚನೆ, ಫಿಶಿಂಗ್ ಮತ್ತು ಬಲವಂತದ ಅಪರಾಧಗಳಿಗೆ ತಳ್ಳುವ ಜಾಗತಿಕ ಜಾಲದ ಮೇಲೆ ಬೆಳಕು ಚೆಲ್ಲುತ್ತದೆ; ಇದನ್ನು ತಡೆಯಲು ಭಾರತ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 143, ಅನೈತಿಕ ಸಂಚಾರ (ತಡೆ) ಕಾಯ್ದೆ, ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000 ಮತ್ತು ವಿದೇಶಾಂಗ ಸಚಿವಾಲಯದ ಸುರಕ್ಷಿತ ವಲಸೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
________________________________________________________________________________



