1). ಮಹಿಳಾ ಮೀಸಲು ತಿದ್ದುಪಡಿ ವಿಧೇಯಕವನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ? ಹಾಗೂ ಅದು ಎಷ್ಟು ಶೇಕಡಾ ಮೀಸಲಾತಿಯನ್ನು ಒದಗಿಸುತ್ತದೆ?
ಉತ್ತರ: ನಾರಿ ಶಕ್ತಿ ವಂದನ್ ಅಧಿನಿಯಮ (Women’s Reservation Act, 2023) – 33% ಮೀಸಲಾತಿ
[ವಿವರಣೆ : 2023ರಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲು ತಿದ್ದುಪಡಿ ವಿಧೇಯಕವನ್ನು “ನಾರಿ ಶಕ್ತಿ ವಂದನ್ ಅಧಿನಿಯಮ” ಎಂದು ಕರೆಯಲಾಗುತ್ತದೆ. ಈ ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸಲಾಗುತ್ತದೆ.
ಆದರೆ ಈ ಮೀಸಲಾತಿ ಜನಗಣತಿ ಮತ್ತು ಕ್ಷೇತ್ರ ಪುನರ್ವಿನ್ಯಾಸ (delimitation) ನಂತರ ಜಾರಿಗೆ ಬರಲಿದೆ.]
----------------------------------------------------------------------------------------------------------------------------
2). ಇತ್ತೀಚೆಗೆ (ಮಾರ್ಚ್ 2026 ರಲ್ಲಿ) ಗ್ರಾಮ ಪಂಚಾಯತ್, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಇವಿಎಂ (EVM) ಬದಲಿಗೆ 'ಮತಪತ್ರ' (Ballot Paper) ಬಳಸಲು ತಿದ್ದುಪಡಿ ತಂದ ರಾಜ್ಯ ಯಾವುದು?
ಉತ್ತರ: ಕರ್ನಾಟಕ
[ವಿವರಣೆ : ಕರ್ನಾಟಕ ಸರ್ಕಾರವು 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2026' ಅನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
ಪ್ರಮುಖ ಬದಲಾವಣೆ : ಈ ತಿದ್ದುಪಡಿಯ ಮುಖ್ಯ ಉದ್ದೇಶವೆಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್) ಇದುವರೆಗೆ ಬಳಸಲಾಗುತ್ತಿದ್ದ ವಿದ್ಯುನ್ಮಾನ ಮತಯಂತ್ರಗಳ (EVM) ಬದಲಿಗೆ ಹಳೆಯ ಪದ್ಧತಿಯಾದ ಮತಪತ್ರ (Ballot Paper) ಮೂಲಕ ಚುನಾವಣೆ ನಡೆಸುವುದು.]
-----------------------------------------------------------------------------------------------------------------------------
3). ಇತ್ತೀಚೆಗೆ ಮರ್ಯಾದೆಗೇಡು ಹತ್ಯೆ (Honor Killing) ತಡೆಗಟ್ಟಲು ಮತ್ತು ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ರಕ್ಷಿಸಲು 'ಇವ ನಮ್ಮವ, ಇವ ನಮ್ಮವ' ಹೆಸರಿನ ವಿಧೇಯಕವನ್ನು ಅಂಗೀಕರಿಸಿದ ರಾಜ್ಯ ಯಾವುದು?
ಉತ್ತರ: ಕರ್ನಾಟಕ
[ವಿವರಣೆ : ಕರ್ನಾಟಕ ಸರ್ಕಾರವು 'ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ' ವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ.
ಮಸೂದೆಯ ಮುಖ್ಯ ಉದ್ದೇಶಗಳು : ಮರ್ಯಾದೆಗೇಡು ಹತ್ಯೆ ತಡೆ: ಜಾತಿ ಅಥವಾ ಧರ್ಮದ ಮಿತಿ ಮೀರಿ ಪ್ರೀತಿಸಿ ಮದುವೆಯಾಗುವವರ ಮೇಲೆ 'ಮರ್ಯಾದೆ' ಹೆಸರಿನಲ್ಲಿ ನಡೆಯುವ ಹಲ್ಲೆ, ಬಹಿಷ್ಕಾರ ಮತ್ತು ಹತ್ಯೆಗಳನ್ನು ತಡೆಯುವುದು.]
----------------------------------------------------------------------------------------------------------------------------
4). ಇತ್ತೀಚಿನ ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವಲ್ಲಿ ಭಾರತಕ್ಕೆ ಇರುವ ಪ್ರಮುಖ ಆರ್ಥಿಕ ಲಾಭವೇನು?
ಉತ್ತರ: ರಿಯಾಯಿತಿ ದರದಲ್ಲಿ ತೈಲ ಲಭ್ಯತೆ ಮತ್ತು ಸಂಸ್ಕರಿಸಿದ ತೈಲ ರಫ್ತಿನಿಂದ ವಿದೇಶಿ ವಿನಿಮಯ ಗಳಿಕೆ
[ವಿವರಣೆ : ರಷ್ಯಾದ ಆರ್ಥಿಕ ಸ್ಥಿತಿ ಮತ್ತು 'ಶಾಕ್ ಥೆರಪಿ' (Shock Therapy): 1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, ರಷ್ಯಾ ತನ್ನ ಆರ್ಥಿಕತೆಯನ್ನು ಕಮ್ಯುನಿಸಂನಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬದಲಾಯಿಸಿತು. ಈ ಹಠಾತ್ ಆರ್ಥಿಕ ಬದಲಾವಣೆಯನ್ನು 'ಶಾಕ್ ಥೆರಪಿ' ಎಂದು ಕರೆಯಲಾಗುತ್ತದೆ. ಇದರ ಪರಿಣಾಮವಾಗಿ ರಷ್ಯಾ ತೀವ್ರ ಹಣದುಬ್ಬರ ಮತ್ತು ಸಾಲದ ಸುಳಿಗೆ ಸಿಲುಕಿತ್ತು.
ಪ್ರಸಕ್ತ ತೈಲ ರಾಜಕೀಯ (Oil Geo-politics) : ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದವು. ಇದರಿಂದ ರಷ್ಯಾ ತನ್ನ ತೈಲವನ್ನು ಮಾರಾಟ ಮಾಡಲು ಏಷ್ಯಾದ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಕಡೆಗೆ ಮುಖ ಮಾಡ…]
-----------------------------------------------------------------------------------------------------------------------------
5). ಇತ್ತೀಚೆಗೆ ಕರ್ನಾಟಕ ಸರ್ಕಾರವು 'ಗೌರವದ ಹೆಸರಿನಲ್ಲಿ ನಡೆಯುವ ಕೊಲೆಗಳನ್ನು' (Honor Killing) ತಡೆಗಟ್ಟಲು ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯ ಹೆಸರೇನು?
ಉತ್ತರ: 'ಇವ ನಮ್ಮವ' ಮಸೂದೆ - 2026 (ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಗೌರವದ ಹೆಸರಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ಮಸೂದೆ).
[ವಿವರಣೆ : ಹಿನ್ನೆಲೆ : ಸಾಂಪ್ರದಾಯಿಕವಾಗಿ 'ಗೌರವದ ಹೆಸರಿನಲ್ಲಿ ನಡೆಯುವ ಕೊಲೆಗಳು' ಕೇವಲ ಉತ್ತರ ಭಾರತಕ್ಕೆ ಸೀಮಿತ ಎಂಬ ನಂಬಿಕೆಯಿತ್ತು. ಆದರೆ, ಕರ್ನಾಟಕ ಗೃಹ ಸಚಿವರಾದ ಜಿ. ಪರಮೇಶ್ವರ್ ನೀಡಿದ ಅಂಕಿಅಂಶಗಳ ಪ್ರಕಾರ, 2021 ರಿಂದ 2025ರ ಅವಧಿಯಲ್ಲಿ ರಾಜ್ಯದಲ್ಲಿ ಕನಿಷ್ಠ 15 ಗೌರವ ಕೊಲೆಗಳು ದಾಖಲಾಗಿವೆ. ಇದು ಸಮಾಜದಲ್ಲಿ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ಎಷ್ಟು ಆಳವಾಗಿವೆ ಎಂಬುದನ್ನು ತೋರಿಸುತ್ತದೆ.
ಮಸೂದೆಯ ಉದ್ದೇಶ: ಜಾತಿ ಮೀರಿ ಪ್ರೀತಿಸಿ ಮದುವೆಯಾದವರನ್ನು ಗೌರವದ ಹೆಸರಿನಲ್ಲಿ ಹತ್ಯೆ ಮಾಡುವವರು ಮತ್ತು ಅಂತಹ ದಂಪತಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.]
----------------------------------------------------------------------------------------------------------------------------
6). ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ ಭಾಷಾ ಕಲಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ಪ್ರಮುಖ ನೀತಿ ಅಥವಾ ಸೂತ್ರ ಯಾವುದು?
ಉತ್ತರ: ತ್ರಿಭಾಷಾ ಸೂತ್ರ (Three-Language Formula) ಮತ್ತು ಬಹುಭಾಷಾ ತತ್ವ (Multilingualism).
[ವಿವರಣೆ : ಭಾಷಾ ಹೇರಿಕೆ ಇಲ್ಲ: ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ರಾಜ್ಯಗಳ ಮೇಲೆ ಹೇರುವುದಿಲ್ಲ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
ತ್ರಿಭಾಷಾ ಮತ್ತು ದ್ವಿಭಾಷಾ ಸೂತ್ರ: NEP ಯಲ್ಲಿನ ತ್ರಿಭಾಷಾ ವಿಚಾರವು ದ್ವಿಭಾಷಾ ಸೂತ್ರಕ್ಕೆ ಅನುಗುಣವಾಗಿಯೇ ಇದೆ. ಇದರ ಸಂಪೂರ್ಣ ಅನುಷ್ಠಾನದ ಜವಾಬ್ದಾರಿಯನ್ನು ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಡಲಾಗಿದೆ.]
-----------------------------------------------------------------------------------------------------------------------------
7). ಏಷ್ಯಾ ಕಪ್ ಮಾದರಿಯಲ್ಲಿಯೇ ಯುರೋಪಿಯನ್ ರಾಷ್ಟ್ರಗಳಿಗಾಗಿ ಆರಂಭಿಸಲು ಉದ್ದೇಶಿಸಲಾಗಿರುವ ಹೊಸ ಕ್ರಿಕೆಟ್ ಟೂರ್ನಮೆಂಟ್‌ನ ಹೆಸರೇನು?
ಉತ್ತರ: ಯುರೋ ನೇಷನ್ಸ್ ಕಪ್ (Euro Nations Cup).
[ವಿವರಣೆ : ಹಿನ್ನೆಲೆ: ಏಷ್ಯಾದಲ್ಲಿ ನಡೆಯುವ 'ಏಷ್ಯಾ ಕಪ್' ಕ್ರಿಕೆಟ್ ಟೂರ್ನಿಯ ಯಶಸ್ಸಿನ ಮಾದರಿಯಲ್ಲೇ ಯುರೋಪ್ ಖಂಡದ ರಾಷ್ಟ್ರಗಳಿಗೂ ಪ್ರತ್ಯೇಕ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲು ಯೋಜಿಸಲಾಗಿದೆ.
ಭಾಗವಹಿಸುವ ತಂಡಗಳು: ಇದರಲ್ಲಿ ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್, ಇಟಲಿ ಮತ್ತು ನೆದರ್ಲೆಂಡ್ಸ್ ಸೇರಿದಂತೆ ಯುರೋಪಿನ ಪ್ರಮುಖ ಕ್ರಿಕೆಟ್ ತಂಡಗಳು ಭಾಗವಹಿಸಲಿವೆ.]
----------------------------------------------------------------------------------------------------------------------------
8). ಇತ್ತೀಚಿನ ಮಧ್ಯಪ್ರಾಚ್ಯ ಸಂಘರ್ಷಗಳಿಂದಾಗಿ ಜಾಗತಿಕ ರಸಗೊಬ್ಬರ ಮತ್ತು ಔಷಧ ಪೂರೈಕೆಯ ಮೇಲೆ ಪರಿಣಾಮ ಬೀರಿದ ಪ್ರಮುಖ ಸಮುದ್ರ ಮಾರ್ಗ ಯಾವುದು ಮತ್ತು ಔಷಧ ವಿತರಣೆಯ ಪ್ರಮುಖ 'ಲಾಜಿಸ್ಟಿಕ್ ಕೇಂದ್ರ' ಯಾವುದು?
ಉತ್ತರ: ಪ್ರಮುಖ ಸಮುದ್ರ ಮಾರ್ಗ: ಹರ್ಮುಜ್ ಜಲಸಂಧಿ (Strait of Hormuz); ಪ್ರಮುಖ ಲಾಜಿಸ್ಟಿಕ್ ಕೇಂದ್ರ: ದುಬೈ (ಯುಎಇ).
[ವಿವರಣೆ : ರಸಗೊಬ್ಬರ ಪೂರೈಕೆ: ವಿಶ್ವದ ಒಟ್ಟು ರಸಗೊಬ್ಬರ ಪೂರೈಕೆಯ ಸುಮಾರು 3ನೇ 1 ಭಾಗ ಹರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ಇರಾನ್ ದೊಡ್ಡ ರಸಗೊಬ್ಬರ ರಫ್ತುದಾರನಾಗಿರುವುದರಿಂದ, ಈ ಮಾರ್ಗದಲ್ಲಿನ ಅಡಚಣೆಯು ಜಾಗತಿಕ ಆಹಾರ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಔಷಧ ಪೂರೈಕೆ ಮತ್ತು ದುಬೈ: ದುಬೈ ಅನ್ನು ಜಾಗತಿಕ ಔಷಧ ವಲಯದ ಪ್ರಮುಖ 'ಲಾಜಿಸ್ಟಿಕ್ ಕೇಂದ್ರ' ಎಂದು ಕರೆಯಲಾಗುತ್ತದೆ. ಇಲ್ಲಿ ಅತ್ಯಾಧುನಿಕ 'ಕೋಲ್ಡ್ ಚೈನ್' ಸ್ಟೋರೇಜ್ ವ್ಯವಸ್ಥೆಗಳಿರುವುದರಿಂದ ಔಷಧಗಳ ಜಾಗತಿಕ ವಿತರಣೆಗೆ ಇದು ಅತಿ ಮುಖ್ಯವಾಗಿದೆ.]
----------------------------------------------------------------------------------------------------------------------------
ರಾಜ್ಯ ಸುದ್ದಿಗಳು :
- ಕರ್ನಾಟಕ ವಿಧಾನಸಭೆಯು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2026 ಕ್ಕೆ ಅಂಗೀಕಾರ ನೀಡಿದ್ದು, ಇದರ ಅನ್ವಯ ಇನ್ನು ಮುಂದೆ ರಾಜ್ಯದ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ (EVM) ಬದಲಿಗೆ ಬ್ಯಾಲೆಟ್ ಪೇಪರ್ (ಮತಪತ್ರ) ಬಳಸಲು ಅವಕಾಶ ಕಲ್ಪಿಸಲಾಗಿದೆ.
- ಕರ್ನಾಟಕ ರಾಜ್ಯದಲ್ಲಿ 2025ರಲ್ಲಿ 75,318 ಕ್ಷಯ (TB) ಪ್ರಕರಣಗಳು ಪತ್ತೆಯಾಗಿದ್ದು, ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ವಲ್ಪ ಇಳಿಮುಖವಾಗಿದ್ದರೂ, ರಾಜ್ಯದ ಮರಣ ಪ್ರಮಾಣವು (ಶೇ. 6) ರಾಷ್ಟ್ರೀಯ ಸರಾಸರಿಗಿಂತ (ಶೇ. 3.9) ಹೆಚ್ಚಿದೆ; ಅಲ್ಲದೆ ಕ್ಷಯದ ಜೊತೆಗೆ ಎಚ್‌ಐವಿ ಹೊಂದಿರುವವರಿಗೆ ಕ್ಷಯ ನಿರೋಧಕ ಚಿಕಿತ್ಸೆಯೊಂದಿಗೆ ಆಂಟಿ ರಿಟ್ರೋವೈರಲ್ ಥೆರಪಿ (ART) ನೀಡಲಾಗುತ್ತಿದೆ.
-----------------------------------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
- ಕಚ್ಚಾ ತೈಲದ ಬೆಲೆ ಏರಿಕೆ, ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಇಕ್ವಿಟಿ ಮಾರುಕಟ್ಟೆಯ ಕುಸಿತದಿಂದಾಗಿ ಅಮೇರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು 50 ಪೈಸೆ ಇಳಿದು ದಾಖಲೆ ಮಟ್ಟದ 94.03 ರೂ. ಗೆ ತಲುಪುವ ಮೂಲಕ ಮೊದಲ ಬಾರಿಗೆ 94 ರೂ. ಗಡಿಯನ್ನು ದಾಟಿದೆ.
- ಭಾರತದ ಆಂಧ್ರಪ್ರದೇಶದ ವಿಶಾಖಪಟ್ಟಣ ಹಾಗೂ ಕರ್ನಾಟಕದ ಮಂಗಳೂರು ಮತ್ತು ಪಾಡೂರುಗಳಲ್ಲಿರುವ ಭೂಗತ ತೈಲ ಸಂಗ್ರಹಾಗಾರಗಳು (Strategic Petroleum Reserves) ಪ್ರಸ್ತುತ ಶೇ. 64 ರಷ್ಟು ಭರ್ತಿಯಾಗಿದ್ದು, ತುರ್ತು ಸಂದರ್ಭದಲ್ಲಿ ದೇಶಕ್ಕೆ ಒಂಬತ್ತುವರೆ ದಿನಗಳ ಕಾಲ ಕಚ್ಚಾ ತೈಲ ಪೂರೈಸುವ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಹಾಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
- ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ 2023ರ ಕಾಯಿದೆಯನ್ನು, ಕ್ಷೇತ್ರ ಪುನರ್ವಿಂಗಡಣೆಗಿಂತ ಮೊದಲೇ ಜಾರಿಗೆ ತರಲು ಕೇಂದ್ರ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ಸಾಂವಿಧಾನಿಕ ತಿದ್ದುಪಡಿ ತರಲು ಮುಂದಾಗಿದ್ದು, ಇದರ ಅಡಿಯಲ್ಲಿ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 543 ರಿಂದ 816ಕ್ಕೆ ಏರಿಸಿ ಅದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಯೋಜಿಸಲಾಗಿದೆ.
----------------------------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
- ಸೋವಿಯತ್ ಒಕ್ಕೂಟದ ಪತನದ ನಂತರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದ ರಷ್ಯಾ, ಉಕ್ರೇನ್ ಯುದ್ಧದ ನಡುವೆಯೂ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳನ್ನು ಮೆಟ್ಟಿ ನಿಂತು ಭಾರತಕ್ಕೆ ರಿಯಾಯಿತಿ ದರದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಪೂರೈಸುವ ಮೂಲಕ ತನ್ನ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರುವ
- ಏಷ್ಯಾ ಕಪ್ ಮಾದರಿಯಲ್ಲಿಯೇ ಯುರೋಪಿಯನ್ ರಾಷ್ಟ್ರಗಳಿಗಾಗಿ ಮುಂದಿನ ವರ್ಷದಿಂದ (2026-27) 'ಯುರೋ ನೇಷನ್ಸ್ ಕಪ್' ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ ಆರಂಭಿಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ಇಂಗ್ಲೆಂಡ್, ಐರ್ಲೆಂಡ್ ಸೇರಿದಂತೆ ಪ್ರಮುಖ ಯುರೋಪಿಯನ್ ತಂಡಗಳು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಭಾಗವಹಿಸಲಿವೆ.



No comments:
Post a Comment