ರಾಜ್ಯ ಸುದ್ದಿಗಳು :
ಕರ್ನಾಟಕದ ಜಾತಿನೀತಿ ಮತ್ತು ಮೀಸಲಾತಿ ಬದಲಾವಣೆಯ ಮಹತ್ವದ ಹೆಜ್ಜೆ ;
ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿಗಣತಿ) ವರದಿಯು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಹಿಂದುಳಿದ ವರ್ಗಗಳ ಒಟ್ಟಾರೆ ಮೀಸಲಾತಿಯನ್ನು ಪ್ರಸ್ತುತವಿರುವ ಶೇಕಡಾ 32 ರಿಂದ ಶೇಕಡಾ 42 ಕ್ಕೆ ಹೆಚ್ಚಿಸಲು ಹಾಗೂ ಒಬಿಸಿ (OBC) ವರ್ಗಗಳ ಒಳಗೆ ಮತ್ತಷ್ಟು ಸೂಕ್ಷ್ಮವಾಗಿ ವರ್ಗೀಕರಿಸಿ ‘ಒಳಮೀಸಲಾತಿ’ ಕಲ್ಪಿಸಲು ಅತ್ಯಂತ ಪ್ರಮುಖ ಶಿಫಾರಸುಗಳನ್ನು ಮಾಡಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಆರ್. ಮಧುಸೂದನ್ ನಾಯಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಸಲ್ಲಿಸಿರುವ 280 ಪುಟಗಳ ಈ ವರದಿಯು, ರಾಜ್ಯದ ಪ್ರಮುಖ ಧರ್ಮ ಮತ್ತು ಜಾತಿಗಳ ಜನಸಂಖ್ಯೆಯ ಅಂದಾಜು ವಿವರಗಳನ್ನು ಒಳಗೊಂಡಿದೆ. ವರದಿಯ ಪ್ರಕಾರ ಒಟ್ಟು 6.14 ಕೋಟಿ ಜನಸಂಖ್ಯೆಯಲ್ಲಿ 5.86 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಮುಸ್ಲಿಂ (80 ಲಕ್ಷ), ವೀರಶೈವ/ಲಿಂಗಾಯತ (65 ಲಕ್ಷ), ಒಕ್ಕಲಿಗರು (60 ಲಕ್ಷ) ಮತ್ತು ಕುರುಬ (45 ಲಕ್ಷ) ಸಮುದಾಯಗಳ ಜನಸಂಖ್ಯಾ ಅಂಕಿ-ಅಂಶಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಈ ಸಮೀಕ್ಷೆಯ ಆಧಾರದ ಮೇಲೆ ಪ್ರಸ್ತುತವಿರುವ ಪ್ರವರ್ಗಗಳನ್ನು ಮರುಹಂಚಿಕೆ ಮಾಡಲು ಸೂಚಿಸಲಾಗಿದ್ದು, ಪ್ರವರ್ಗ-1 ಅನ್ನು ಎರಡು ಭಾಗಗಳಾಗಿ ಹಾಗೂ ಪ್ರವರ್ಗ-2 ಮತ್ತು ಪ್ರವರ್ಗ-3 ರ ಒಳಗಿನ ಜಾತಿಗಳನ್ನು ಮೂರು ಭಾಗಗಳಾಗಿ ಸೂಕ್ಷ್ಮವಾಗಿ ವಿಂಗಡಿಸಿ ಸಾಮಾಜಿಕ ನ್ಯಾಯ ಒದಗಿಸಲು ವರದಿಯಲ್ಲಿ ತಾರ್ಕಿಕ ಲೆಕ್ಕಾಚಾರಗಳನ್ನು ನೀಡಲಾಗಿದೆ. ಈ ಹಿಂದೆ 2015 ರಲ್ಲಿ ಎಚ್. ಕಾಂತರಾಜ್ ಆಯೋಗ ಸಿದ್ಧಪಡಿಸಿದ್ದ ವರದಿಯ ಮುಂದುವರಿದ ಭಾಗವಾಗಿರುವ ಈ ಸಮೀಕ್ಷೆಯು, ಮುಂಬರುವ ದಿನಗಳಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರಗಳ ಮೀಸಲಾತಿ ನೀತಿಯಲ್ಲಿ ದಿಕ್ಸೂಚಿಯಾಗುವ ಸಾಧ್ಯತೆ ಇದೆ.
--------------------------------
ಸಾಹಿತ್ಯ ಲೋಕಕ್ಕೆ ಅಮನ ಜೆ ಕುಮಾರ್ ಅವರ "ದಿ ಮಿಸ್ಟಿಕಲ್ ವೇವ್ಸ್" ಕೃತಿಯ ಕೊಡುಗೆ. :
ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿದ್ದಾಗ ಅಂದರೆ ತಮ್ಮ 11ನೇ ವಯಸ್ಸಿನಲ್ಲೇ ಬರವಣಿಗೆಯನ್ನು ಆರಂಭಿಸಿ, ಇತ್ತೀಚೆಗಷ್ಟೇ ಜಯನಗರದ ಆರ್.ವಿ. ಪಿಯು ಕಾಲೇಜಿನಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿರುವ ಯುವ ಪ್ರತಿಭೆ ಅಮನ ಜೆ ಕುಮಾರ್ ಅವರು ಈ ಹಿಂದೆ ಮೂರು ಇಂಗ್ಲಿಷ್ ಹಾಗೂ ಒಂದು ಹಿಂದಿ ಸೇರಿದಂತೆ ಒಟ್ಟು ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ ಹೆಜ್ಜೆಯನ್ನಿಟ್ಟು, ಪ್ರಸ್ತುತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಂದ ಮುನ್ನುಡಿ ಬರೆಸಲ್ಪಟ್ಟು, ಒಬ್ಬ ವ್ಯಕ್ತಿಯ ಜೀವನ ಪಯಣದ ಪ್ರತಿಬಿಂಬದಂತೆ ಅನುಭವಗಳು, ನಿರೀಕ್ಷೆಗಳು ಹಾಗೂ ಅಪಾರ ಆನಂದದ ಸಂಯೋಜನೆಯಾಗಿ ರೂಪುಗೊಂಡು, ಬ್ಲ್ಯಾಕ್-ಔಟ್ ಕವನಗಳು ಮತ್ತು ಸೋನೆಟ್‌ಗಳೆಂಬ ಎರಡು ಭಿನ್ನ ಕಾವ್ಯ ಶೈಲಿಗಳ ಅದ್ಭುತ ಸಮನ್ವಯದೊಂದಿಗೆ ಪ್ರತಿಯೊಂದು ಪದದಲ್ಲೂ ಆಳವಾದ ಅರ್ಥ ಹಾಗೂ ಚಿಂತನೆಯ ಸಾಗರವನ್ನು ತುಂಬಿಕೊಂಡು ಓದುಗರ ಕಲ್ಪನೆ ಮತ್ತು ಬುದ್ಧಿವಂತಿಕೆಯನ್ನು ಅನಾವರಣಗೊಳಿಸುವ ವಿಶಿಷ್ಟತೆಯನ್ನು ಹೊಂದಿರುವ ತಮ್ಮ 5ನೇ ಕೃತಿಯಾದ "ದಿ ಮಿಸ್ಟಿಕಲ್ ವೇವ್ಸ್" ಅನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ' ಪುರಸ್ಕೃತರಾದ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರ ಅಮೃತ ಹಸ್ತದಿಂದ ಮೇ 28 ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
-------------------------------
ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ (APY ಸಾಧನೆ) :
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪೆನ್ಷನ್ ಯೋಜನೆ (APY) ಅನುಷ್ಠಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB), ದೆಹಲಿಯಲ್ಲಿ ನಡೆದ ವಾರ್ಷಿಕ ಸನ್ಮಾನ ಸಮಾರಂಭದಲ್ಲಿ ಪ್ರತಿಷ್ಠಿತ 'ವಿಷನರಿ ಅಚೀವರ್ (Visionary Achiever 2025-26)' ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ರಾಜ್ಯಕ್ಕೆ ಹೆಮ್ಮೆಯ ಗರಿ ತಂದಿದೆ.
ದೇಶದ ಗ್ರಾಮೀಣ ಭಾಗದ ಜನರಿಗೆ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಯಶಸ್ವಿ ಸಾಮಾಜಿಕ ಭದ್ರತಾ ಯೋಜನೆ 'ಅಟಲ್ ಪೆನ್ಷನ್ ಯೋಜನೆ' (Atal Pension Yojana - APY) ಆಗಿದೆ. ಈ ಯೋಜನೆಯನ್ನು ತಳಮಟ್ಟದ ಜನರಿಗೆ ತಲುಪಿಸುವಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ಶ್ಲಾಘನೀಯ ಮೈಲಿಗಲ್ಲನ್ನು ಸ್ಥಾಪಿಸಿದೆ. ಪೆನ್ಷನ್ ಫಂಡ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ವತಿಯಿಂದ ಮೇ 2026 ರಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯಾಂಕಿನ ಈ ಅಸಾಧಾರಣ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ.
--------------------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಧೇಯಕ ಅಂಗೀಕಾರ :
ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಆಸ್ತಿ ಹಕ್ಕು (ಉತ್ತರಾಧಿಕಾರ) ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಲು ಸಾಮಾನ್ಯ ಕಾನೂನು ಚೌಕಟ್ಟನ್ನು ತರುವ ಉದ್ದೇಶದ ‘ದಿ ಯುನಿಫಾರ್ಮ್ ಸಿವಿಲ್ ಕೋಡ್, ಅಸ್ಸಾಂ - 2026’ ವಿಧೇಯಕವನ್ನು ವಿರೋಧ ಪಕ್ಷಗಳ ತೀವ್ರ ಆಕ್ಷೇಪ ಮತ್ತು ಗದ್ದಲದ ನಡುವೆಯೂ ಅಸ್ಸಾಂ ವಿಧಾನಸಭೆಯು ಧ್ವನಿಮತದ ಮೂಲಕ ಯಶಸ್ವಿಯಾಗಿ ಅಂಗೀಕರಿಸಿದೆ.
ದೇಶದ ಮೂರನೇ ರಾಜ್ಯ: ಈ ಐತಿಹಾಸಿಕ ವಿಧೇಯಕದ ಅಂಗೀಕಾರದೊಂದಿಗೆ, ಉತ್ತರಾಖಂಡ ಮತ್ತು ಗುಜರಾತ್ ನಂತರ ಏಕರೂಪ ನಾಗರಿಕ ಸಂಹಿತೆ (UCC) ವಿಧೇಯಕವನ್ನು ಅಳವಡಿಸಿಕೊಂಡ ದೇಶದ ಮೂರನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ. ಗೋವಾ ರಾಜ್ಯವು ತನ್ನ ಹಳೆಯ ಪೋರ್ಚುಗೀಸ್ ವಸಾಹತುಶಾಹಿ ಕಾಲದಿಂದಲೂ ಇಂತಹ ಸಾಮಾನ್ಯ ನಾಗರಿಕ ಕಾನೂನನ್ನು ಈಗಾಗಲೇ ಹೊಂದಿರುವುದು ಇಲ್ಲಿ ಗಮನಾರ್ಹವಾಗಿದೆ.
ವಿಧೇಯಕದ ಮುಖ್ಯ ಉದ್ದೇಶಗಳು: ಈ ನೂತನ ಕರಡು ಕಾನೂನು ಬಹುಪತ್ನಿತ್ವ ಅಥವಾ ಬಹುಪತಿತ್ವವನ್ನು (Polygamy) ಸಂಪೂರ್ಣವಾಗಿ ನಿಷೇಧಿಸುತ್ತದೆ. ಇದರೊಂದಿಗೆ ಮದುವೆ ಹಾಗೂ ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಿದೆ.
ವಿನಾಯಿತಿಗಳು: ಅಸ್ಸಾಂನ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುವ ಸಲುವಾಗಿ, ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಗಳನ್ನು (ST) ಈ ಕಾಯ್ದೆಯ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.
ಸದನದಲ್ಲಿ ತೀವ್ರ ವಿರೋಧ: ಈ ವಿಧೇಯಕವನ್ನು ವಿಸ್ತೃತ ಪರಿಶೀಲನೆಗಾಗಿ ಜಂಟಿ ಸಂಸದೀಯ ಅಥವಾ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಪಟ್ಟು ಹಿಡಿದಿದ್ದವು. ಆದರೆ ಸ್ಪೀಕರ್ ರಂಜಿತ್ ಕುಮಾರ್ ದಾಸ್ ಅವರು ಈ ಬೇಡಿಕೆಯನ್ನು ತಿರಸ್ಕರಿಸಿದಾಗ, ಆಕ್ರೋಶಗೊಂಡ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಪೀಠದ ಮುಂಭಾಗದ ಸ್ಥಳಕ್ಕೆ ತೆರಳಿ ಘೋಷಣೆಗಳನ್ನು ಕೂಗಿ ವಾಕೌಟ್ ಮಾಡಿದರು. ಆಡಳಿತ ಪಕ್ಷದ ಸದಸ್ಯರು 'ಭಾರತ್ ಮಾತಾ ಕೀ ಜೈ' ಮತ್ತು 'ಜೈ ಶ್ರೀ ರಾಮ್' ಘೋಷಣೆಗಳ ನಡುವೆ ವಿಧೇಯಕದ ಪರವಾಗಿ ಮತ ಚಲಾಯಿಸಿದರು.
----------------------------------
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಜಾಗತಿಕ ನಾಯಕರಿಗೆ ಭಾರತದ ವಿವಿಧ ರಾಜ್ಯಗಳ ವಿಶಿಷ್ಟ ಬುಡಕಟ್ಟು ಕಲಾಕೃತಿಗಳು ಹಾಗೂ ಜಿಐ ಟ್ಯಾಗ್ (GI Tag) ಹೊಂದಿರುವ ದೇಶಿ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ದೇಶದ ಶ್ರೀಮಂತ ಪರಂಪರೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.
ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತವು ತನ್ನ ಸಾಂಸ್ಕೃತಿಕ ಹೆಜ್ಜೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಭೇಟಿಯಾದಾಗ, ಕೇವಲ ಔಪಚಾರಿಕ ರಾಜತಾಂತ್ರಿಕ ಮಾತುಕತೆಗಳಿಗೆ ಸೀಮಿತವಾಗದೆ, ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಬೇರುಗಳನ್ನು ಜಗತ್ತಿಗೆ ಪರಿಚಯಿಸುವ ಅಪೂರ್ವ ಪ್ರಯತ್ನ ಮಾಡಿದ್ದಾರೆ.
---------------------------------------
ಕ್ರೀಡಾ ಲೋಕದ ಧ್ರುವತಾರೆ ರಾಜಾ ರಣಧೀರ್ ಸಿಂಗ್ ಅಸ್ತಂಗತ :
ಏಷ್ಯನ್ ಗೇಮ್ಸ್‌ನ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಹೆಮ್ಮೆಯ ಶೂಟರ್, ಐದು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಖ್ಯಾತ ಕ್ರೀಡಾ ಅಡ್ಮಿನಿಸ್ಟ್ರೇಟರ್ ಹಾಗೂ ಇತ್ತೀಚೆಗಷ್ಟೇ ಏಷ್ಯಾ ಒಲಿಂಪಿಕ್ ಕೌನ್ಸಿಲ್ (OCA) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 79 ವರ್ಷದ ರಾಜಾ ರಣಧೀರ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದಾಗಿ ಬುಧವಾರ ನವದೆಹಲಿಯಲ್ಲಿ ನಿಧನರಾಗಿದ್ದಾರೆ.
ಭಾರತೀಯ ಕ್ರೀಡಾ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಧೀಮಂತ ವ್ಯಕ್ತಿತ್ವ ರಾಜಾ ರಣಧೀರ್ ಸಿಂಗ್ ಅವರ ಕ್ರೀಡಾ ಯಾನ ಈಗ ಅಂತ್ಯಗೊಂಡಿದೆ. ಕೇವಲ ಕ್ರೀಡಾಪಟುವಾಗಿ ಮಾತ್ರವಲ್ಲದೆ, ಕ್ರೀಡಾಡಳಿತಗಾರನಾಗಿಯೂ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು.
ಪ್ರಮುಖ ಸಾಧನೆಗಳು ಮತ್ತು ಮೈಲಿಗಲ್ಲುಗಳು:
ಐತಿಹಾಸಿಕ ಶೂಟರ್: 1978ರ ಏಷ್ಯನ್ ಗೇಮ್ಸ್‌ನ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡ ಭಾರತದ ಮೊದಲ ಶೂಟರ್ ಎಂಬ ಐತಿಹಾಸಿಕ ದಾಖಲೆ ಇವರದ್ದಾಗಿದೆ. ಕ್ರೀಡಾ ಸಾಧನೆಗಾಗಿ ಇವರಿಗೆ 1979 ರಲ್ಲಿ 'ಅರ್ಜುನ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು.
ಒಲಿಂಪಿಕ್ಸ್ ಮತ್ತು ಆಡಳಿತ: 1964 ರಿಂದ 1984ರ ಅವಧಿಯಲ್ಲಿ ಒಟ್ಟು ಐದು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಇವರು ಭಾಗವಹಿಸಿದ್ದರು. ಕ್ರೀಡಾಂಗಣದಿಂದ ನಿವೃತ್ತರಾದ ಬಳಿಕ ಆಡಳಿತ ರಂಗಕ್ಕೆ ಧುಮುಕಿದ ಇವರು, ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಪ್ರಧಾನ ಕಾರ್ಯದರ್ಶಿಯಾಗಿ (1987-2010) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಸದಸ್ಯರಾಗಿ ಸುದೀರ್ಘ ಸೇವೆ ಸಲ್ಲಿಸಿದರು.
ಅಂತಾರಾಷ್ಟ್ರೀಯ ಗೌರವ: ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ (OCA) ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘಕಾಲ ಕೆಲಸ ಮಾಡಿದ್ದ ಇವರು, 2024 ರಲ್ಲಿ ಅದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಈ ಉನ್ನತ ಹುದ್ದೆಗೇರಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಆದರೆ, ತೀವ್ರ ಅನಾರೋಗ್ಯದ ಕಾರಣ ಇತ್ತೀಚೆಗಷ್ಟೇ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಅವರ ಪುತ್ರಿ ರಾಜೇಶ್ವರಿ ಸಿಂಗ್ ಕೂಡ ಪ್ರಸ್ತುತ ಅಂತರರಾಷ್ಟ್ರೀಯ ಶೂಟರ್ ಆಗಿ ತಂದೆಯ ಕ್ರೀಡಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಭಾರತೀಯ ರೈಫಲ್ ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಭಾಟಿಯಾ ಸೇರಿದಂತೆ ಇಡೀ ಕ್ರೀಡಾ ಜಗತ್ತು ರಣಧೀರ್ ಸಿಂಗ್ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
------------------------------
ಹಳೆಯ ಆಧಾರ್ ಆಪ್‌ಗೆ ಬ್ರೇಕ್: ಸುರಕ್ಷಿತ ಹೊಸ ತಂತ್ರಜ್ಞಾನದ ಅಳವಡಿಕೆ :
ಡಿಜಿಟಲ್ ವಂಚನೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಬಯೋಮೆಟ್ರಿಕ್ ಡೇಟಾವನ್ನು ದುರ್ಬಳಕೆಯಿಂದ ರಕ್ಷಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಭದ್ರತಾ ಲೋಪಗಳಿದ್ದ ಹಳೆಯ 'mAadhar' ಆಪ್ ಅನ್ನು ಸ್ಥಗಿತಗೊಳಿಸಿ, ಅದರ ಬದಲಿಗೆ ಅತ್ಯಾಧುನಿಕ 'ಫೇಸ್ ಅಥೆಂಟಿಕೇಶನ್' (ಮುಖದ ಗುರುತಿಸುವಿಕೆ) ಮತ್ತು ಬಯೋಮೆಟ್ರಿಕ್ ಲಾಕ್ ವ್ಯವಸ್ಥೆಯುಳ್ಳ ಹೊಸ ಸುರಕ್ಷಿತ ಆಧಾರ್ ಆಪ್ ಅನ್ನು ಪರಿಚಯಿಸಿದೆ; ಇದರ ಜೊತೆಗೆ ಸಾರ್ವಜನಿಕರಿಗೆ ದೊಡ್ಡ ಉಪಶಮನ ನೀಡುವ ಸಲುವಾಗಿ ಮೈಆಧಾರ್ (myAadhaar) ಪೋರ್ಟಲ್ ಮೂಲಕ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸುವ (ಅಪ್‌ಡೇಟ್ ಮಾಡುವ) ಕೊನೆಯ ಗಡುವನ್ನು ಜೂನ್ 14, 2027 ರವರೆಗೆ (ಮತ್ತೊಂದು ವರ್ಷ) ವಿಸ್ತರಿಸಲಾಗಿದ್ದು, ಹತ್ತು ವರ್ಷ ಹಳೆಯದಾದ ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ತಮ್ಮ ಗುರುತಿನ ಚೀಟಿ ಮತ್ತು ವಿಳಾಸದ ಪುರಾವೆಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ; ಈ ಹೊಸ ಸುರಕ್ಷಿತ ವ್ಯವಸ್ಥೆಯಲ್ಲಿ ಒಟಿಪಿ (OTP) ವಂಚನೆಗಳು ಮತ್ತು ಸಿಮ್ ಕ್ಲೋನಿಂಗ್ ತಡೆಗಟ್ಟಲು ಹಾಗೂ ಹೋಟೆಲ್‌ಗಳು ಅಥವಾ ಆಸ್ಪತ್ರೆಗಳಲ್ಲಿ ಸಂಪೂರ್ಣ ಆಧಾರ್ ಸಂಖ್ಯೆ ನೀಡುವ ಬದಲು ಕೇವಲ ಕನಿಷ್ಠ ಮಾಹಿತಿ ಹಂಚಿಕೊಳ್ಳುವ ಸುರಕ್ಷಿತ ಕ್ಯೂಆರ್ ಕೋಡ್ (QR Code) ಬಳಕೆಗೆ ಆದ್ಯತೆ ನೀಡಲಾಗಿದೆ.
------------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
ನಾಸಾದ ಮಹತ್ವಾಕಾಂಕ್ಷೆಯ 'ಮೂನ್ ಬೇಸ್' ಯೋಜನೆ :
ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ (NASA), ಚಂದ್ರನ ದಕ್ಷಿಣ ಧ್ರುವದಲ್ಲಿ ಕೇವಲ ಹೆಜ್ಜೆಗುರುತುಗಳನ್ನು ಮೂಡಿಸುವುದಷ್ಟೇ ಅಲ್ಲದೆ ಅಲ್ಲಿ ಖಾಯಂ ಆಗಿ ಮಾನವ ವಸತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸುಮಾರು 20 ಶತಕೋಟಿ ಡಾಲರ್ (ಅಂದಾಜು ₹1.90 ಲಕ್ಷ ಕೋಟಿ) ವೆಚ್ಚದ ಬೃಹತ್ 'ಮೂನ್ ಬೇಸ್' ಯೋಜನೆಯನ್ನು ಪ್ರಕಟಿಸಿದೆ.
ವಿಜ್ಞಾನ ಲೋಕದ ದೃಷ್ಟಿಯಿಂದ ಅತ್ಯಂತ ವಿಭಿನ್ನ ಹಾಗೂ ಸಾಹಸಮಯ ಹೆಜ್ಜೆಯಾಗಿರುವ ಈ ಯೋಜನೆಯು ಮೂರು ಪ್ರಮುಖ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. 2026 ರಿಂದ ಆರಂಭಗೊಂಡು ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಇದು ಚಂದ್ರನ ಮೇಲ್ಮೈಯಲ್ಲಿ ಶಾಶ್ವತ ನೆಲೆ ನಿರ್ಮಿಸುವ ಗುರಿ ಹೊಂದಿದೆ.
-------------------------------------
ವಿಶ್ವ ಋತುಚಕ್ರ ನೈರ್ಮಲ್ಯ ದಿನದ ಜಾಗತಿಕ ಜಾಗೃತಿ
ಮಹಿಳೆಯರ ಆರೋಗ್ಯ ಮತ್ತು ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಹಾಗೂ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂದಿಗೂ ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಸುರಕ್ಷಿತ ನೈರ್ಮಲ್ಯವನ್ನು ಕಾಯ್ದುಕೊಳ್ಳಲು ಪಡುತ್ತಿರುವ ಹರಸಾಹಸದ ಕುರಿತು ಜಾಗತಿಕವಾಗಿ ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ, 2014ರಲ್ಲಿ ಮೊದಲ ಬಾರಿಗೆ ಚಾಲನೆ ನೀಡಿ ಪ್ರತಿ ವರ್ಷ ಮೇ 28 ರಂದು ಜಗತ್ತಿನಾದ್ಯಂತ 'ವಿಶ್ವ ಋತುಚಕ್ರ ನೈರ್ಮಲ್ಯ ದಿನ'ವನ್ನು ಅತ್ಯಂತ ಮಹತ್ವದೊಂದಿಗೆ ಆಚರಿಸಲಾಗುತ್ತಿದೆ.
-------------------------------------
----------------------------------------------------------------------------------------------------------------




No comments:
Post a Comment